Wednesday, April 10, 2013

ಸಾಧನೆ

ಸಾಧನೆ
 ಚಿತ್ರ ಕೃಪೆ : ಇಂಟರ್ನೆಟ್


ಸಾಧಕನ ಸಾಧನೆಗೆ 
ಹಲವಾರು ಕಾರಣವು 
ಬರಿದೆ ಲಭಿಸುವುದಿಲ್ಲ
 ಗೆಲುವಿನ ಹೂನಗೆ
II ೧ II
ಛಲದಂಕ ಮಲ್ಲ ತಾ 
ದಿನವಿಡೀ ಅಭ್ಯಸಿಪ 
ಅನವರತ ಶ್ರಮಪಡುತ 
ಧ್ಯೇಯೋಧ್ಧೇಶವ  ವಿಜಯಿಪ 
II ೨  II
ದೂರದಾ ಗುರಿಯೆಡೆಗೆ 
ಎಡೆಬಿಡದೆ ನಡೆವಂತೆ 
ಬದುಕಿನಲಿ ಉನ್ನತಿಯು 
ಪಾವಟಿಗೆಯ ಹತ್ತಿದಂತೆ 
II ೩   II
ಅರಿವು ನಗುವಿನ ಸಿಂಚನ
ಅನುಭವವೇ ಜ್ಞಾನದ ಸಂಚಲನ 
ಸೋಲೆಗೆಲುವಿನ ಸೋಪಾನ 
ಸಂಬವಿಪ ಸಾಧನೆಗೆ ಕಾರಣ 
II ೪    II
ಗುರಿಯ ಹಂದರವ ಅಭ್ಯಸಿಸಿ 
ಪಡೆವ ದಾರಿಗಳ ಯೋಚಿಸಿ 
ಸಕಲ ಸಲಕರಣೆಯ ಕೂಡಿಸಿ 
ನುಗ್ಗಿ ನಡೆ ಮುಂದೆ ಬೆವರ ಸುರಿಸಿ 
 II ೫    II
 ಸಾಧನೆಯ ಹಾದಿಯದು 
ಅಂಕು ಡೊಂಕಿನ ಪಯಣ 
ಯಶದ ಶಿಖರವನ್ನೇರಲು  
  ಆಶಿರ್ವಚಿಸು ಓ ಮುಖ್ಯಪ್ರಾಣ 
  II ೬    II 

ಇಂತೀ:  ಜ್ಯೋಮೂಕೀ


ಅಮ್ಮ

ಅಮ್ಮ 
 ಚಿತ್ರ ಕೃಪೆ : ಇಂಟರ್ನೆಟ್  

ಜೀವನದ ಸೌಧಕ್ಕೆ 
ಭವ್ಯ ತಳಹದಿ ಕಟ್ಟಿ 
ಭವಿತವ್ಯ ಉಚ್ಹ್ರಾಯಕೆ 
ಬುನಾದಿಯ ಸೃಷ್ಟಿಕರ್ತೆ 
II ೧ II
ಕಲ್ಲು ಕಲ್ಲುಗಳ ಭಾಂದವ್ಯ
 ಅಸ್ತಿಭಾರದ ದೃಢತೆ 
ಅಮ್ಮ ಕೆತ್ತಿದ ಬಾಲ್ಯ 
ಬಾಳ ಬೆಳಗುವ ಹಣತೆ 
II ೨  II
ಕಂದನ ಅಳು ನಗು 
ಇಡುವ ಮೊದಲ ಹೆಜ್ಜೆ 
ನುಡಿವ ತೊದಲು ನುಡಿ 
ಅಮ್ಮನ ಶ್ರಮದ ಫಲಶ್ರುತಿ 
II ೩   II
ಬಾಲ್ಯ ಹರೆಯಗಳೆರಡು 
ಸೌಧದ ಮೊದಲೆರಡು ಸ್ಥಿತಿ 
ಬಾಳ ಪಯಣದಿ ಮುಂದಿಹುದು 
ಗುರಿ ಗೋಪುರದ ಉನ್ನತಿ 
II ೪    II
ಮಮತೆಯಲಿ ಕಟ್ಟಿಹಳು 
ಅಮ್ಮ ಬಾಳಿನ ಬುನಾದಿ
ಛಲ, ಶ್ರಮ, ಪ್ರಯತ್ನಗಳು
 ಸಾಧನೆಯ ಸೌಧಕ್ಕೆ ಆದಿ 
 II ೫    II
ಮನುಜ ಜನುಮದಿ ಹುಟ್ಟಿ 
ಸಾಧನೆಯ ಸೌಧವ ಕಟ್ಟಿ 
ಹುಟ್ಟು ಸಾವಿನ ಪ್ರಯಾಣ 
ನಿನ್ನ ಲೀಲೆ ಓ ಮುಖ್ಯಪ್ರಾಣ 
  II ೬    II 

ಇಂತೀ:  ಜ್ಯೋಮೂಕೀ


ಒಲುಮೆ

ಒಲುಮೆ 
 ಚಿತ್ರ ಕೃಪೆ : ಇಂಟರ್ನೆಟ್  

ನನ್ನದೆಯ ಗೂಡಿನಲಿ 
ಸುಪ್ತ ಭಾವದಿ ಆವಿರ್ಭವಿಸಿ 
ನಿನ್ನೆದೆಯ ಗೂಡನ್ನು 
ಕೈ ಬೀಸಿ ಕರೆಯುತಿಹುದು
II ೧ II 
ಭಾವಾಂತರಾಳದಲಿ 
ಮನಸ ಮೇಟಿಯ ಮೀಟಿ 
ಕನಸ ಗೋಪುರವ 
ಕಟ್ಟಿ ಮೆರೆಯುತಿಹುದು 
II ೨  II
ದಿಗ್ ದಿಗಂತಗಳಾಚೆ 
ಭವದ ಭಾವವ  ಮೀರಿ 
ಪ್ರಣಯ ವಾರಿಧಿಯಲಿ 
ತೇಲಿ ವಿಹರಿಸುತಿಹುದು 
II ೩  II
ಕನಸು ಮನಸಿನ ಮಿಲನ 
ಪ್ರಣಯ ಪ್ರೇಮದ ಕವನ 
ಭಾವನೆಗಳ ಒಳಹೂರಣ 
ನೀ ಪೇಳೋ ಓ ಮುಖ್ಯಪ್ರಾಣ 
II ೪  II

ಇಂತೀ:  ಜ್ಯೋಮೂಕೀ