Friday, November 30, 2012

ಮುಂಜಾನೆ

ಮುಂಜಾನೆ 


ಚಿತ್ರ ಕೃಪೆ : ಅಂತರ್ಜಾಲ 
ಮುಂಜಾನೆ  ಹೊಂಬಿಸಿಲು  ಹರಡಿ ಹಬ್ಬಿದಂತೆಲ್ಲಾ
ಮಬ್ಬುಗತ್ತಲೆ  ಕಳೆದು ಹುರುಪು ಪಸರಿಸುತಿಹುದು  IIಪII

ಮೂಡಣದ  ಬಾನಿನಲಿ  ರವಿ ಮೇಲೇರುವಾಗ
ಹೊಳೆವ ಹೊಂಗಿರಣಗಳು  ಜಗಕೆ ರಂಗೆರಿಸುತಿಹುದು

ಬೀಸುತಿಹ ಕುಳಿರ್ಗಾಳಿ  ಹರಡುತಿಹ  ಸೋನೆ  ಮಂಜು
ಸೂರ್ಯ ಕಿರಣದ ನಡುವೆ ಸ್ಪಟಿಕದಂತೆ ಹೊಳೆಯುತಿಹುದು

ಹಕ್ಕಿಗಳ ಮಾರ್ದನಿಯು ಕೀಟಗಳ ಕಲರವವು
ಮುಂಜಾನೆಯ  ಹೊಂಬಿಸಿಲು ನವ ಹುರುಪು ತಂದಿಹುದು

ಇರುಳು ಕಳೆದಿಹುದು  ಹಗಲು ಮುಂದಿಹುದು
ಕಪ್ಪುಕತ್ತಲು ಕಳೆದು ನವೋತ್ಸಾಹ ಪುಟಿಯುತಿಹುದು

ಗ್ರಹ ಭ್ರಮಣೆಯಾಗಿ ವರ್ಷ ವರ್ಷಗಳುರುಳುತಿಹುದು  
ಕಾಲಚಕ್ರದ ರಹಸ್ಯವ ನೀ ಪೇಳೊ ಓ ಮುಖ್ಯಪ್ರಾಣ
ಇಂತೀ:  ಜ್ಯೋಮೂಕೀ 

Thursday, November 22, 2012

ಜೀವನ

ಜೀವನ 

ಚಿತ್ರ ಕೃಪೆ : ಅಂತರ್ಜಾಲ 
ಧರೆಯ  ಬೊಗಸೆಯಿಂದ
ಮಳೆಯ  ಸಿಂಪಡಿಕೆಯಿಂದ

ಬೀಜದೊಳಗೆ ಪವಡಿಸಿರುವ
ಜೀವಾಮೃತವು ಪುಟಿದೆದ್ದು

ಮೊಳಕೆಯೊಡೆದು ಚಿಗುರಿ
ಹೊರಜಗಕೆ ಬಂದಿಹುದು

ಹೊಸ ಹುಟ್ಟು ಹೊಸ ಬಾಳು
ಮುಂದಿಹುದು ಜೀವನ ಜೈತ್ರಯಾತ್ರೆ

ಜೀವ ಸಂಕುಲದ  ಹುಟ್ಟು ಸಾವುಗಳ
ಮಹಿಮೆಯನು ತಿಳಿಸೋ ಓ ಮುಖ್ಯಪ್ರಾಣ
ಇಂತೀ:  ಜ್ಯೋಮೂಕೀ

Wednesday, November 21, 2012

ಬದುಕು

ಬದುಕು 

ಚಿತ್ರ ಕೃಪೆ : ಅಂತರ್ಜಾಲ 
ಬರಡು  ಜೀವನವೆಂದು  ಬರಿದೆ  ಭಾವಿಸಬೇಡ
ಮರುಭೂಮಿಯಲ್ಲೂ   ಇಹುದು  ನೀರಚಿಲುಮೆ

ಕಷ್ಟಕಾರ್ಪಣ್ಯಗಳೆಂದು   ಪರಿತಪಿಸಲೇಬೇಡ
ಭವದ ಭ್ರಮಣೆಗಳೆಲ್ಲವೂ  ಭಗವಂತನ  ಮಹಿಮೆ

ಕಳೆದಿರುವ  ನಿನ್ನೆಯೂ, ಬರಲಿರುವ ನಾಳೆಯೂ 
ನಮ್ಮ ಇಂದಿನ  ನೆಮ್ಮದಿಯ ಕಳೆಯದಿರಲಿ

ಬದುಕಿಗೊಂದು ಗುರಿಯಿರಲಿ, ಬಾಳಿಗೊಂದು ಕಳೆಯಿರಲಿ
ಜನುಮ ಜನುಮಕು ಜಗದೊದ್ದಾರನ  ದಯೆಯಿರಲಿ .
ಇಂತೀ:  ಜ್ಯೋಮೂಕೀ 

Tuesday, November 20, 2012

ಮನದನ್ನೆಗೆ

ಮನದನ್ನೆಗೆ 

 ಚಿತ್ರ ಕೃಪೆ : ಅಂತರ್ಜಾಲ 


ಭಾನು  ಭುವಿಯಲಿ  ಹಾರಿ ನಲಿಯುತಿದೆ ನನ್ನ ಹೃದಯ ಗಾನ 
ಕನಸು ಮನಸಲೂ, ಹಗಲು ಇರುಳಲೂ  ನನಗೆ ನಿನ್ನದೇ ಧ್ಯಾನ 

ಧಮನಿ ಧಮನಿಗಳಲಿ  ಉಕ್ಕಿ ಹರಿಯುತಿದೆ ನಮ್ಮ ಪ್ರೀತಿ ಪ್ರೇಮ
ಬಾನಾಡಿಗಳು ಬಳಸಿ ತರುತಿವೆ  ನಮ್ಮ ಪ್ರಣಯ  ಕವನ

ಇಂತೀ:  ಜ್ಯೋಮೂಕೀ